ಅನ್ಯಾಕ್ಸಿಮೆಂಡರ್
	ಗ್ರೀಸ್‍ದೇಶದ ತತ್ತ್ವಶಾಸ್ತ್ರಜ್ಞ (ಕ್ರಿ.ಪೂ. 611-547). ಖಗೋಳವಿಜ್ಞಾನದ ಬಗ್ಗೆ ಹಲವು ವಿಚಿತ್ರ ಭಾವನೆಗಳನ್ನು ಹೊಂದಿದ್ದ. ಭೂಪಟಗಳನ್ನು ಮೊಟ್ಟಮೊದಲು ರಚಿಸಿದ ಖ್ಯಾತಿ ಇವನದು. ಅಯನಸಂಕ್ರಾಂತಿ ಮತ್ತು ವಿಷುವತ್ಸಂಕ್ರಾಂತಿಯನ್ನು ನಿರ್ಧರಿಸಲು ನೆರಳುಗಡಿಯಾರದ ಸಮತಲಕಂಬಿಯನ್ನು ಬಳಸಿದವರಲ್ಲಿ ಈತ ಮೊದಲಿಗ. ಸೂರ್ಯ, ಚಂದ್ರ ಮತ್ತು ಭೂಮಿ-ಇವು ಉರುಳೆಯಂತಿವೆಯೆಂದೂ ಸೂರ್ಯನ ಸುತ್ತಳತೆ ಭೂಮಿಯ 28ರಷ್ಟೂ ಚಂದ್ರನ ಸುತ್ತಳತೆ ಭೂಮಿಯ 19ರಷ್ಟೂ ಇದೆ ಎಂಬುದಾಗಿ ಭಾವಿಸಿದ್ದ. ಅಸೀಮವಾದ ಒಂದು ನಿರ್ಲಿಪ್ತ ವಸ್ತುವಿನಿಂದ ಈ ಎಲ್ಲ ವಿಷಮ ಸೃಷ್ಟಿ ಕಾರ್ಯ ಆಯಿತೆಂದೂ ವಿಷಮ ವಸ್ತುಗಳ ಸಂಘರ್ಷದಿಂದ ವಿವಿಧರೂಪಭೇದಗಳು ಹುಟ್ಟಿದುವೆಂದೂ ತಿಳಿಸಿದ. ಜಲಚರಕ್ರಿಯೆಯ, ರೂಪದ ಯಾವುದೇ ಒಂದು ವಿಕಾಸಾತ್ಮಕ ಸರಣಿಯೇ ಮಾನವಜೀವದ ಉಗಮಕ್ಕೆ ಕಾರಣವಾಯಿತು ಎಂಬುದು ಇವನ ಭಾವನೆಯಾಗಿತ್ತು. 		
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ